ಎಹರೆನ್ಬರ್ಗ್, ಇಲ್ಯ ಗ್ರೆಗೊರಿಯೇವಿಚ್: 1891-1967. ರಷ್ಯದ ಕಾದಂಬರಿಕಾರ ಮತ್ತು ವಿಡಂಬನಕಾರ. ಹುಟ್ಟಿದ್ದು ಯೆಹೂದ್ಯ ಕುಟುಂಬದಲ್ಲಿ. 1910ರಲ್ಲಿ ಸಾಹಿತ್ಯ ರಚನೆಗೆ ಕೈಹಾಕಿದ. 1917ರಲ್ಲಿ ಬಾಲ್ಷೆವಿಕ್ ಪಂಗಡಕ್ಕೆ ವಿರೋಧಿಯಾಗಿದ್ದವನು ಕೆಲ ಕಾಲಾನಂತರ ಅದೇ ಪಂಗಡವನ್ನು ಸೇರಿ ಪ್ಯಾರಿಸಿಗೆ ಹೋದ. ಇಲ್ಲಿ ಸಂಕೇತವಿಧಾನದ ಕಲೆಗಾರರ ಪರಿಚಯವಾಯಿತು. ಅಲ್ಲಿದ್ದಾಗ ಜ್ಯೂಲಿಯ ಜ್ಯೂರೆನ್ ಷಿಯೋ ಮತ್ತು ಅವನ ಶಿಷ್ಯರ ಅಸಾಧಾರಣ ಸಾಹಸಗಳು ಎಂಬ ತೀಕ್ಷ್ಣವಾದ ವಿಡಂಬನ ಗ್ರಂಥವನ್ನು ರಚಿಸಿ (1930) ಸಮಕಾಲೀನ ನಾಗರಿಕತೆಯನ್ನು ಹಾಸ್ಯ ಮಾಡಿದ. ಇದೇ ಇವನ ಅತ್ಯುತ್ತಮ ಕೃತಿ ಎಂದು ಕೆಲವರ ಅಭಿಪ್ರಾಯ. ಈತ ಜನಪ್ರಿಯ ಪತ್ರಿಕಾ ಲೇಖಕನೂ ಆಗಿದ್ದ. ಪ್ರೋಟೊಕ್ಕಿ ಕಿರುದಾರಿಯಲ್ಲಿ (1941) ಎಂಬ ಕಾದಂಬರಿಯಲ್ಲಿ ಕರುಣರಸವೇ ಪ್ರಧಾನವಾಗಿದೆ. ಅವ್ಯವಸ್ಥೆಯಿಂದ ಹೊರಕ್ಕೆ (1933) ಎಂಬುದು ತನ್ನ ಜಗತ್ತಿನಿಂದ ದೂರನಾದ ಬೌದ್ಧಿಕ ವ್ಯಕ್ತಿಯ ಅಂತರಂಗದ ಸಂಕಟವನ್ನು ನಿರೂಪಿಸುತ್ತದೆ. ರಷ್ಯದ ಕೈಗಾರಿಕಾ ಯೋಜನೆಯಿಂದ ಹೊಸದೊಂದು ಜಗತ್ತು ಸೃಷ್ಟಿಯಾಗುತ್ತದೆ ಎನ್ನುವ ನೀತಿಯನ್ನು ಇದು ಸಾರುತ್ತದೆ. ಪಕ್ಷದ ನಿಯಮಗಳಿಗೆ ಬದ್ಧವಾಗಿ ತಯಾರಾದ ರಷ್ಯನ್ ಸಾಹಿತ್ಯ ತನ್ನ ಸತ್ತ್ವವನ್ನು ಕಳೆದುಕೊಂಡಿದೆ ಎಂದು ಸ್ಟ್ಯಾಲಿನ್ನನ ಯುಗದ ಅನಂತರ ಟೀಕೆ ಮಾಡಿದವರಲ್ಲಿ ಈತ ಪ್ರಮುಖ. ಅದುವರೆಗೆ ಸ್ಟ್ಯಾಲಿನ್ ಮತ್ತು ಕಮ್ಯುನಿಸ್ಟ್‌ ವರ್ಗದ ತೀವ್ರ ಪಕ್ಷಪಾತಿಯಾಗಿದ್ದ ಈತ ಸಾಮಾಜಿಕ ಪುನರ್ ರಚನೆಗಳನ್ನು ನಿರೂಪಿಸುವುದು ಸಾಹಿತ್ಯಕ್ಕೆ ಮುಖ್ಯವಲ್ಲ, ಮಾನವ ವ್ಯಕ್ತಿಗಳ ಒಳಜಗತ್ತು ಅದರಲ್ಲಿ ಸೃಷ್ಟಿಸಬೇಕು ಎಂದು ಸಾರಿ, ಇಂಥ ಪುಸ್ತಕಗಳನ್ನು ಅಪ್ಪಣೆಯ ಪ್ರಕಾರ ರಚಿಸಲು ಸಾಧ್ಯವಿಲ್ಲ; ಇವು ತಾವೇ ಸೃಷ್ಟಿಯಾಗಬೇಕು. ಆನ ಕರಿನೀನವನ್ನು ಬರೆಯುವಂತೆ ಟಾಲ್ಸ್ಟಾಯ್ಗೆ ಅಪ್ಪಣೆ ಕೊಡುವುದನ್ನು ಊಹಿಸಲು ಸಾಧ್ಯವೇ?-ಎಂದು ಪ್ರಶ್ನಿಸಿದ. ಸ್ಟ್ಯಾಲಿನನ ಕಾಲದ ಅನಂತರ ರಷ್ಯದಲ್ಲಿ ಕಂಡುಬಂದ ಹೊಸ ವಾತಾವರಣದಲ್ಲಿ ಸೃಷ್ಟಿಯಾದ ಕಾದಂಬರಿಗಳಲ್ಲಿ ಇವನ ಹಿಮದ ಕರಗುವಿಕೆ (1954) ಮುಖ್ಯವಾದುದು. ಇದರ ತಾತ್ಪರ್ಯ ಇಷ್ಟು: ವ್ಯಕ್ತಿತ್ವಕ್ಕೆ ಮಹತ್ತ್ವ ನೀಡಬೇಕು. ರಾಗ ದ್ವೇಷಗಳನ್ನು ನಿಯಮಗಳಿಗನುಗುಣವಾಗಿ ವಿಭಾಗಿಸಿ ನಿರೂಪಿಸುವುದು ಸಾಧ್ಯವಿಲ್ಲ. ಪ್ರೇಮ, ಅನುಕಂಪ, ಭಯ, ಅಸೂಯೆ ಇವನ್ನು ಅನುಭವಿಸಿ ಅರಿಯಬೇಕು. ಈ ಕಿರುಕಾದಂಬರಿಯಲ್ಲಿ ಪ್ರತಿ ಪಾತ್ರದ ಒಳ ಜಗತ್ತೇ ವಸ್ತು; ಒಂದೊಂದು ಪಾತ್ರದ ದೃಷ್ಟಿಯಿಂದ ಒಂದೊಂದು ಪ್ರಸಂಗವನ್ನು ನಿರೂಪಿಸಲಾಗಿದೆ. ಈ ಕಾದಂಬರಿಯ ಮುಂದಿನ ಭಾಗ ವಸಂತ. ಈ ಕಾದಂಬರಿಯಲ್ಲಿ ಸ್ಟ್ಯಾಲಿನ್ ಅನಂತರದ ಯುಗದ ಪ್ರಗತಿಯಲ್ಲಿ ಕವಿ ವಿಶ್ವಾಸ ಸೂಚಿಸುತ್ತಾನೆ. ತನ್ನ ಆತ್ಮವೃತ್ತದಲ್ಲಿ 1951ರ ದಶಕದ ಉತ್ತರಾರ್ಧದವರೆಗಿನ ಕಾಲವನ್ನು ಚಿತ್ರಿಸುತ್ತಾನೆ.		      (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ